ಬೈರುಂಡೆ
	ಎಪೋಡಿಫಾರ್ಮೀಸ್ ಗಣದ ಏಪೋಡಿಡೀ ಕುಟುಂಬಕ್ಕೆ ಸೇರಿದ ಸುಮಾರು 67 ಪ್ರಭೇದಗಳ ಹಕ್ಕಿಗಳಿಗಿರುವ ಸಾಮಾನ್ಯ ಹೆಸರು (ಸ್ವಿಫ್ಟ್). ಇಂಗ್ಲಿಷ್ ಹೆಸರೇ ಸೂಚಿಸುವಂತೆ ಇವು ತಮ್ಮ ಹಾರಾಟದ ವೇಗಕ್ಕೆ ಹೆಸರಾಗಿವೆ. ಇವುಗಳ ಪೈಕಿ ಕೆಲವು ಗಂಟೆಗೆ 160 ಕಿಮೀ ವೇಗದಲ್ಲಿ ಹಾರುವುವು. ಭಾರತ, ಇಂಡೋಚೀನ, ಫಿಲಿಪೀನ್ಸ್, ಈಸ್ಟ್ ಇಂಡೀಸ್‍ಗಳಲ್ಲಿ ಕಾಣದೊರೆಯುವ ಸ್ಪೈನ್‍ಟೇಲ್ ಸ್ವಿಪ್ಟ್ ಎಂಬುದಂತೂ ಹಕ್ಕಿಗಳಲ್ಲೇ ಅತಿವೇಗದಲ್ಲಿ ಹಾರಬಲ್ಲ ಜೀವಿಯೆನಿಸಿದ; ಇದರ ಹಾರಾಟದ ವೇಗ ಗಂಟೆಗೆ 240-320ಕಿಮೀ. ಇವುಗಳ ರೆಕ್ಕೆಬಡಿತ ಬರಿಗಣ್ಣಿಗೆ ಅಗೋಚರವಾಗುವಷ್ಟು ಶೀಘ್ರಗತಿಯದು. ಅಲ್ಲದೆ ಕೆಲವು ಬಗೆಯ ಬೈರುಂಡೆಗಳು ತಮ್ಮೆರಡು ರೆಕ್ಕೆಗಳನ್ನು ವಿಭಿನ್ನ ವೇಗಗಳಲ್ಲಿ ಬಡಿಯಬಲ್ಲವು.  ಹೀಗೆ ಮಾಡುವುದರಿಂದ ಹಾರುವಾಗ ದಿಕ್ಕು ಬದಲಿಸಲು ಸಾಧ್ಯವಾಗುತ್ತದೆ (ಇವುಗಳ ಬಾಲದ ಗರಿಗಳು ಚಿಕ್ಕವಾಗಿರುವುದರಿಂದ ಬೇರೆ ಹಕ್ಕಿಗಳಂತೆ ಬಾಲದ ಸಹಾಯದಿಂದ ದಿಕ್ಕು ಬದಲಿಸಲು ಇವಕ್ಕೆ ಆಗದು).

	ಇವುಗಳ ಹಾರಾಟವೂ ನಿರಾಯಾಸಕರವಾದ್ದು. ಇವು ಸ್ವಲ್ಪವೂ ವಿಶ್ರಮಿಸದೇ ನಿರಂತರವಾಗಿ ಹಾರಾಡುತ್ತಲೇ ಕಾಲಕಳೆಯುವುವು ಎಂಬ ಅಭಿಪ್ರಾಯ ಇದೆಯಾದರೂ ಇದು ಉತ್ಪ್ರೇಕ್ಷೆ.  ಆದರೆ ಬೇರೆ ಹಕ್ಕಿಗಳಿಗೆ ಹೋಲಿಸಿದರೆ ಇವು ಹೆಚ್ಚು ಕಾಲವನ್ನು, ರಾತ್ರಿ ಸಮಯವೂ ಸೇರಿದಂತೆ, ಹಾರಾಟದಲ್ಲೇ ಕಳೆಯುತ್ತವೆ ಎಂಬುದು ನಿಜ. ಬೈರುಂಡೆಗಳು ಪ್ರತಿರಾತ್ರಿ ಸ್ವರ್ಗದಲ್ಲಿ ವಿಶ್ರಾಂತಿ ಪಡೆಯುತ್ತವೆ ಎಂಬ ನಂಬಿಕೆಯೂ ಇತ್ತು.

	ಇವು ಚಿಕ್ಕಗಾತ್ರದ ಹಕ್ಕಿಗಳು. ಮೈಬಣ್ಣ ಸಾದಾತೆರನಾದ್ದು; ಬೂದಿ ಇಲ್ಲವೆ ಕಂದು.  ಹೆಣ್ಣು ಗಂಡುಗಳಲ್ಲಿ ಬಣ್ಣ ವ್ಯತ್ಯಾಸವಾಗಲಿ ಗಾತ್ರಭಿನ್ನತೆಯಾಗಲಿ ಇಲ್ಲ. ದೇಹ ಮಾತ್ರ ಹಾರಾಟಕ್ಕೆ ಅತ್ಯಂತ ಯುಕ್ತ ರೀತಿಯಲ್ಲಿ ರಚಿತವಾಗಿದೆ. ರೆಕ್ಕೆಗಳು ಸಪುರ ಹಾಗೂ ಚೂಪು. ಬಾಲ ಮೋಟು, ಗಡಸು. ಕೊಕ್ಕು ಪುಟ್ಟದು. ಬಾಯಿ ಅಗಲ ; ಕಣ್ಣಿನವರೆಗೂ ತೆರೆಯುವಂತಿದೆ. ಬೈರುಂಡೆಗಳು ಹಾರಾಡುತ್ತಲೇ ಗಾಳಿಯಲ್ಲಿರುವ ಕೀಟಾದಿಗಳನ್ನು ಹಿಡಿಯುವುದರಿಂದ ಇಂಥ ಬಾಯಿ ಅತ್ಯಂತ ಅನುಕೂಲ. ಬೈರುಂಡೆಗಳ ಕಾಲುಗಳೋ ತುಂಬ ಚಿಕ್ಕವು. ಜೊತೆಗೆ ಹಕ್ಕಿಯ ಭಾರವನ್ನು ಕೂಡ ಹೊರಲಾರದಷ್ಟು ಇವು ದುರ್ಬಲವಾಗಿರುವುದರಿಂದ ಹಕ್ಕಿ ನೆಲದ ಮೇಲಾಗಲೀ ರೆಂಬೆಗಳ ಮೇಲಾಗಲೀ ಕೂರದು. ಬಹುಶಃ ದಿನದ ಬಹು ವೇಳೆಯನ್ನು ಹಾರಾಟದಲ್ಲೇ ಕಳೆಯುವುದರಿಂದ ಕಾಲುಗಳಿಗೆ ಕೆಲಸವಿಲ್ಲವಾಗಿ ಇವು ಬಲಹೀನವಾಗಿರಬೇಕು.  ಆದರೆ ಚೂಪು ನಖಗಳಿರುವುದರಿಂದ ವಿಶ್ರಮಿಸಿಕೊಳ್ಳುವಾಗ, ಪ್ರಪಾತಗೋಡೆಗಳು, ಮರಗಳ ಕಾಂಡಗಳು ಇಲ್ಲವೆ ಹೊಗೆ ಕೊಳವಿಗಳು, ಮುಂತಾದ ಊಧ್ರ್ವತಲಗಳಿಗೆ ಮುಖಮೇಲಾಗಿ ಅಂಟಿಕೊಂಡಿರುವುವು.

	ಬೈರುಂಡೆಗಳ ಇನ್ನೊಂದು ವಿಚಿತ್ರ ಗುಣ ವ್ಯಕ್ತವಾಗುವುದು ಗೂಡು ನಿರ್ಮಾಣದಲ್ಲಿ. ಹುಲ್ಲು ಕಡ್ಡಿ, ಗರಿ ಮುಂತಾದ ಹಗುರವಸ್ತುಗಳನ್ನು ತಮ್ಮ ಅಂಟಂಟಾದ ಜೊಲ್ಲಿನಿಂದ ಮೇಲೆ ಹೇಳಿದಂಥ ಊಧ್ರ್ವತಲಗಳಿಗೆ ಅಂಟಿಸಿ ರಚಿಸುವುವು.  ಕೆಲವು ಬಗೆಯ ಬೈರುಂಡೆಗಳು ಪ್ರಪಾತಗಳ ಬಂಡೆಗಳನ್ನು ಆಯ್ದರೆ, ಇನ್ನು ಕೆಲವು ನಿರ್ವಸಿತ ಮನೆ, ಶಾಲೆ ಕಾರ್ಖಾನೆ ಮುಂತಾದವುಗಳ ಹೊಗೆ ಕೊಳವಿಗಳ ಒಳಮೈಯನ್ನು ಆಯ್ದುಕೊಳ್ಳುವುವು. ಮತ್ತೆ ಕೆಲವು (ಉದಾಹರಣೆಗೆ ಆಫ್ರಿಕದ ತಾಳೆ ಬೈರುಂಡೆ-ಪಾಮ್‍ಸ್ವಿಫ್ಟ್) ನೇತುಬಿದ್ದತಾಳೆಗರಿ, ಬಾಳೆಎಲೆ, ಮುಂತಾದವುಗಳ ಮೇಲೆ ಗರಿಪುಕ್ಕಗಳನ್ನು ಬಳಸಿ ಚಪ್ಪಟೆಯಾದ ಮೆತ್ತೆಯಂಥ ಗೂಡನ್ನು ನಿರ್ಮಿಸಿ ಜೊಲ್ಲಿನ ನೆರವಿನಿಂದ ಅಂಟಿಸುವುವು.  ಸ್ವತಃ ತಾವೇ ಕೂರಲಾರದಷ್ಟು ಚಿಕ್ಕದಾದ ಈ ಗೂಡಿಗೆ ಹೆಣ್ಣು ಹಕ್ಕಿ ತನ್ನ ಒಂದು ಇಲ್ಲವೆ ಎರಡು ಮೊಟ್ಟೆಗಳನ್ನು ಜೊಲ್ಲಿನಿಂದ ಅಂಟಿಸಿಡುತ್ತದೆ.  ಗಾಳಿಬೀಸಿ ಗರಿ ಅಲ್ಲಾಡಿದರೂ ಮೊಟ್ಟೆಗಳು ಬೀಳುವುದಿಲ್ಲ. ತಂದೆತಾಯಿ ಹಕ್ಕಿಗಳೆರಡೂ ತಮ್ಮ ಬೆರಳುಗಳಿಂದ ನೇತುಬಿದ್ದು, ಮೊಟ್ಟೆಗಳಿಗೆ ಕಾವುಕೊಟ್ಟು ಮರಿಮಾಡುವುವು. ಮರಿಗಳು ಸಹ ದೊಡ್ಡವಾಗುವವರೆಗೂ ಇದೇ ರೀತಿ ತಲೆಮೇಲಾಗಿ ತೂಗುಬಿದ್ದೇ ಕಾಲ ಕಳೆಯುವುವು.

	ಇಂಡೋ-ಆಸ್ಟ್ರೇಲಿಯ ವಲಯ ಮತ್ತು ಪಶ್ಚಿಮ ಪೆಸಿಫಿಕ್ ದ್ವೀಪಗಳಲ್ಲಿ ವಾಸಿಸುವ ಗುಹಾಬೈರುಂಡೆಗಳು ತೊಗಟೆಗಳ ಚೂರುಪಾರು, ಕಲ್ಲುಹೂಗಳ ತುಣುಕುಗಳು, ಇನ್ನಿತರ ಸಸ್ಯ ಸಾಮಗ್ರಿಗಳನ್ನೂ ವಿಫುಲ ಮೊತ್ತದ ಜೊಲ್ಲನ್ನೂ ಸೇರಿಸಿ ಬಟ್ಟಲಿನಾಕಾರದ ಗೂಡುಗಳನ್ನು ಕಟ್ಟಿ ಕಲ್ಲುಬಂಡೆಗಳ ಊಧ್ರ್ವತಲ ಮರಗಳ ಬೊಡ್ಡೆಗಳಿಗೆ ಅಂಟಿಸಿಡುವುವು. ಈ ಜೊಲ್ಲಿನಲ್ಲಿ ಗಣನೀಯ ಮೊತ್ತದ ಪ್ರೋಟೀನ್ ಇರುವುದರಿಂದ ಆ ದ್ವೀಪಗಳ ಮೂಲನಿವಾಸಿಗಳು ಗೂಡುಗಳನ್ನು ಕಿತ್ತು, ಇವುಗಳಿಂದ ಸಾರನ್ನು ತಯಾರಿಸಿ ಸೇವಿಸುವರು. ಇದು ಅಲ್ಲಿಯವರೆಗೆ ಬಲು ಅಚ್ಚುಮೆಚ್ಚಿನ ಖಾದ್ಯ ವಸ್ತುವಾಗಿದೆಯಾಗಿ ಗೂಡು ಸಂಗ್ರಹ ಲಾಭದಾಯಕ ವ್ಯಾಪಾರವಾಗಿದೆ.
(ಎಂ.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ